
ಕಳೆದು ಹೋಗಲ್ಲ ಮಗು...
ಕಂನಾಡಿಗಾ ನಾರಾಯಣ
ಸಣ್ಣ ಪಟ್ಟಣವೊಂದರಲ್ಲಿ ನೆಮ್ಮದಿಯಾಗಿ ಕೆಲಸ ಮಾಡಿಕೊಂಡಿದ್ದ ನನ್ನನ್ನು ಇದ್ದಕ್ಕಿದ್ದಂತೆ ಬೃಹತ್ತಾದ ಬೆಂಗಳೂರೆಂಬ ಮಹಾನಗರಿಗೆ ಎತ್ತಂಗಡಿ ಮಾಡಿದಾಕ್ಷಣ ಸುಲಭವಾಗಿ ರಾಜಧಾನಿಗೆ ಬಂದುಬಿಟ್ಟೆನಲ್ಲ ಎಂಬ ಖುಷಿ ಒಂದು ಕಡೆಯಾದರೆ, ಮಕ್ಕಳಿಗೆ ಶಾಲೆಯಲ್ಲಿ ಸೀಟು ಗಳಿಸುವುದು ಹೇಗೆಂಬ ಆತಂಕ ಇನ್ನೊಂದು ಕಡೆ...
ಯಾರು ಯಾರನ್ನೋ ಹಿಡಿದು ಶಿಫಾರಸು ಮಾಡಿಸಿ, ಸಾವಿರಗಟ್ಟಲೇ ಡೊನೇಷನ್ ಕಕ್ಕಿ, ಪ್ರತಿಷ್ಠಿತ ಶಾಲೆಯೊಂದರಲ್ಲಿ ಇಬ್ಬರು ಮಕ್ಕಳಿಗೂ ಸೀಟು ಗಿಟ್ಟಿಸುವಷ್ಟರಲ್ಲಿ ಸಾಕು- ಸಾಕಾಗಿ ಹೋಯಿತು. ಹೊಸದಾಗಿ ಸರ್ಕಾರಿ ಕೆಲಸ ದಕ್ಕಿಸಿಕೊಳ್ಳುವುದಕ್ಕಿಂತ, ಮಂತ್ರಿ- ಮಹೋದಯರನ್ನು ಹಿಡಿದು ಬೇಕೆನಿಸಿದ ಕಡೆಗೆ ವರ್ಗಾವಣೆ ಮಾಡಿಸಿಕೊಳ್ಳುವುದಕ್ಕಿಂತ ಇದು ಕಷ್ಟ ಎನ್ನುವಂತಾಗಿ ಹೋಯಿತು.
ಮೊದಲ ದಿನ ಸ್ಕೂಲಿಗೆ ಸೇರಿಸಲೆಂದು ಮಕ್ಕಳನ್ನ ಕರೆದುಕೊಂಡು ಹೋಗಿದ್ದಾಗ ಮಗ, ಯೂನಿಫಾರಂ ಹಾಕಿಕೊಂಡಿರುವ ಅಷ್ಟೊಂದು ಮಕ್ಕಳನ್ನು ನೋಡಿ 'ಒಂದೇ ತರಹ ಇರುವ ಇಷ್ಟೊಂದು ಮಕ್ಕಳ ಮಧ್ಯೆ ನಾನು ಕಳೆದುಹೋದರೆ ಹೇಗೆ ಹುಡುಕುತ್ತೀ ಅಪ್ಪಾ...' ಎಂದು ಮುಗ್ಧ ಪ್ರಶ್ನೆ ಎಸೆದಿದ್ದ. 'ಹಾಗೆಲ್ಲ ಸುಮ್ಮಸುಮ್ಮನೆ ಕಳೆದು ಹೋಗಲ್ಲ ಮಗು... ನಾನು ಗುರುತಿಸದಿದ್ದರೂ ನೀನು ನನ್ನನ್ನು ಗುರುತಿಸುತ್ತೀಯಲ್ಲವಾ...' ಅಂತ ಅವನ ಸಮಾಧಾನಕ್ಕೆ ಹೇಳಿದರೂ ಮನಸ್ಸಿನೊಳಗೆ ಏನೋ ಒಂಥರಾ ಅಳುಕು... ಆದರೂ ಇರಲಿ ಎಂದು ನನ್ನ ಮೊಬೈಲ್ ನಂಬರನ್ನು ಅವನಿಗೆ ಬಾಯಿಪಾಠ ಮಾಡಿಸಿ, ಬೇರೆ ಫೋನಿನಿಂದ ನನ್ನ ನಂಬರಿಗೆ ಫೋನು ಮಾಡುವುದು ಹೇಗೆಂದೂ ಹೇಳಿಕೊಟ್ಟೆ. 'ನೀನು ಫೋನು ಮಾಡಿದ ತಕ್ಷಣ ನೀನು ಎಲ್ಲಿರುತ್ತೀಯೋ ಅಲ್ಲಿಗೆ ಬಂದುಬಿಡುತ್ತೇನೆ, ಡೋಂಟ್ ವರಿ...' ಎಂದು ಸಮಾಧಾನಿಸಿದೆ.
ಮಕ್ಕಳು ಬೆಳಗ್ಗೆ ಏಳು ಗಂಟೆಗೇ ಮನೆಯನ್ನು ಬಿಡಬೇಕು. ಅಷ್ಟು ಬೇಗನೇ ಎದ್ದು ಒಂದು ಕಡೆ ಅವಕ್ಕೆ ಸ್ನಾನ ಮಾಡಿಸಬೇಕು, ಇನ್ನೊಂದು ಕಡೆ ತಿಂಡಿ ತಿನ್ನಿಸಬೇಕು, ಮತ್ತೊಂದು ಕಡೆ ಯೂನಿಫಾರಂ ಹಾಕಿಸಬೇಕು.. ಅಷ್ಟರಲ್ಲೇ ಶಾಲೆಯ ವಾಹನ ಮನೆಯ ಮುಂದಕ್ಕೆ ಬಂದು ನಿಂತು ಕೆಟ್ಟದಾಗಿ ಹಾರ್ನ್ ಮಾಡುತ್ತಿತ್ತು. ಮಕ್ಕಳು ಸರಿಯಾಗಿ ತಿಂಡಿಯನ್ನೂ ತಿನ್ನದೇ, ಶೂ ಒಳಗಿನ ಸಾಕ್ಸ್ನ್ನೂ ಹಾಕಲಾರದೇ, ವ್ಯಾನ್ನಲ್ಲೇ ಹಾಕಿಕೊಳ್ಳುತ್ತೇವೆಂದು ಕೈಯಲ್ಲೇ ಹಿಡಿದು ದಡಬಡಾಯಿಸಿ ಓಡಿ ಹೋಗಿ ಹತ್ತುತ್ತಿದ್ದವು. ಒಂದೊಂದು ಮನೆಯಲ್ಲಿ ಇಷ್ಟೊತ್ತಾದರೆ ಎಲ್ಲರನ್ನೂ ಪಿಕಪ್ ಮಾಡುವುದು ಹೇಗೆಂದು ಡ್ರೈವರ್ ಅಸಹನೆ ತೋರುತ್ತಿದ್ದ.
ಅಷ್ಟೊತ್ತಿಗಾಗಲೇ ಮಕ್ಕಳ ವಿಷಯಕ್ಕೆ ಮನೆಯಲ್ಲಿ ಗಂಡ- ಹೆಂಡತಿ ನಡುವೆ ಒಂದು ದೊಡ್ಡ ರಾದ್ಧಾಂತವೇ ನಡೆದು ಹೋಗಿರುತ್ತಿತ್ತು. ಮಕ್ಕಳು ಮನೆಯಿಂದ ಹೊರಟ ತಕ್ಷಣ ಮನೆಯಲ್ಲಿ ಒಂದು ನೀರವ ಮೌನ, ಮಲೆನಾಡ ಮಳೆಯಂತೆ ದಿಢೀರನೆ ಬಂದು, ರಪರಪನೇ ಬಡಿದು ಬಿಟ್ಟು ಹೋದ ಹಾಗೆ... ಇಬ್ಬರೂ ಒಬ್ಬರ ಮೇಲೊಬ್ಬರು ಮುನಿಸಿಕೊಂಡು ನನ್ನ ಪಾಡಿಗೆ ನಾನು ಆಫೀಸಿಗೆ ಹೋಗಲು ತಯಾರಿ ನಡೆಸುತ್ತಿದ್ದರೆ, ಆಕೆ ತಿಂಡಿ ಮಾಡಲು ತೆರಳುತ್ತಿದ್ದಳು...
***
ಅವತ್ತೊಂದು ದಿನ... ಕಚೇರಿ ಕೆಲಸ ಆರಂಭವಾಗಿ ಗಂಟೆಯಿನ್ನೂ ಕಳೆದಿರಲಿಲ್ಲ.. ಭೀಕರವಾದ ಸದ್ದು... ನಮ್ಮ ಬುಡದಲ್ಲೇ, ಇಲ್ಲೇ ಎಲ್ಲೋ ಬಾಂಬ್ ಸಿಡಿದಂತೆ... ಯಾವುದೋ ಸಿಟಿ ಬಸ್ಸಿನ ಟೈರು ಬರ್ಸ್ಟ್ ಆಗಿರಬಹುದೆಂದು ಒಬ್ಬರ ಮುಖ ಒಬ್ಬರು ನೋಡಿಕೊಂಡು ಸುಮ್ಮನಾದೆವು... ಮತ್ತೊಮ್ಮೆ ಅಂತದೇ ಸದ್ದು... ದೂರದಲ್ಲೆಲ್ಲೋ ಮತ್ತೊಂದು ಸದ್ದು... ಸುತ್ತಮುತ್ತಲೆಲ್ಲಾ ಜನರ ಗದ್ದಲ... ಅಲ್ಲೆಲ್ಲೋ ಒಂದು ಕಡೆ ಜನ ಗುಂಪುಗಟ್ಟುತ್ತಿದ್ದಂತೆಯೇ ಇನ್ನೊಂದು ಕಡೆ ಜನ ಓಡುತ್ತಿದ್ದುದು ನಾವಿದ್ದ ಮಹಡಿ ಮೇಲಿನ ಕಿಟಕಿಯಿಂದ ಕಾಣುತ್ತಿತ್ತು.. ಕ್ಷಣಮಾತ್ರದಲ್ಲಿ ಇಡೀ ನಗರ ಅಲ್ಲೋಲ ಕಲ್ಲೋಲವಾಯಿತು... ಏನಾಯಿತೆಂದು ಯಾರಿಗೂ ಗೊತ್ತಾಗುತ್ತಿಲ್ಲ... ಅದೇನು ಬಾಂಬಿನ ಸದ್ದೋ, ಪೊಲೀಸರ ಗುಂಡಿನ ಸದ್ದೋ...
ಬಾಸ್ಯಿದ್ದವನು, 'ಈ ಊರಲ್ಲಿ ಇದೆಲ್ಲಾ ಕಾಮನ್' ಎನ್ನುತ್ತಾ, 'ಮೀಟಿಂಗ್ ಪೇಪರ್ ರೆಡಿ ಮಾಡಬೇಕು, ಇಲ್ಲದಿದ್ದರೆ ಸಾಯಂಕಾಲ ಮೀಟಿಂಗ್ನಲ್ಲಿ ಮಿನಿಷ್ಟ್ರು ಚೆನ್ನಾಗಿ ಉಗೀತಾನೆ, ಬನ್ರೀ...' ಎಂದು ತನ್ನ ಛೇಂಬರ್ಗೆ ಕರೆದೊಯ್ದು ಬಾಗಿಲು ಮುಚ್ಚಿಸಿದ.
ಅಷ್ಟರಲ್ಲಿ ಒಂದು ಫೋನ್ ಕರೆ... ಯಾವುದೋ ಲ್ಯಾಂಡ್ ಲೈನಿನಿಂದ.. ಅಪರಿಚಿತ ಸಂಖ್ಯೆ... ಅದರ ಸದ್ದಿಗೇ ನನ್ನ ಮುಖ ನೋಡಿದ ಬಾಸ್ ಅಸಹನೆ ವ್ಯಕ್ತಪಡಿಸಿದ... 'ಸ್ವಿಚ್ ಆಫ್ ಮಾಡ್ರೀ...' ಎಂದು ರೇಗಿದ. ಜತೆಗಿದ್ದ ಇನ್ನೂ ಕೆಲವರು ತಮಗೂ ಇದೇ ಅನ್ವಯವಾಗುತ್ತದೆಯೆನ್ನುವಂತೆ ಸ್ವಿಚ್ ಆಫ್ ಮಾಡಿದರು. ಆದರೂ, ಆಮೇಲೆ ಯಾರು ಫೋನ್ ಮಾಡಿದ್ದರು ಅಂತಾದರೂ ಗೊತ್ತಾಗಲಿ ಎಂದು ಸೈಲೆಂಟ್ ಮೋಡ್ಗೆ ಬದಲಾಯಿಸಿದೆ. ಮತ್ತೆ ಅದೇ ನಂಬರಿನಿಂದ ಕರೆ... ಐದಾರು ಸಲ... ಪಾಪ ಯಾರಿಗೆ ಏನು ಅರ್ಜೆಂಟ್ ಇತ್ತೋ, ಒಂದೇ ಒಂದು ಸಲ ಕಾಲ್ ರಿಸೀವ್ ಮಾಡಿ ಬಿಡೋಣ ಎಂಬ ತವಕ ನನಗೇನೋ ಇತ್ತು... ಆದರೆ ಆ ಬಾಸ್... ಮುಖ ಮುಖ ನೋಡುತ್ತಾನೆ...ಆತನಿಗೇನೋ ನೂರಾರು ಕಾಲ್ ಬರುತ್ತಿರುತ್ತವೆ. ಅವುಗಳ ಕಾಟ ತಡೆಯಲಾರದೇ ಸ್ವಿಚ್ ಆಫ್ ಮಾಡಿ ಬಿಡುತ್ತಾನೆ... ಆದರೆ ನಮಗೆ ಬರುವುದೇ ಕೆಲವು ಕಾಲ್... ಅವು ಜಿನೈನ್ ಆಗಿರುತ್ತವೆ ಎಂಬ ಅನಿಸಿಕೆ ನನ್ನದಾದರೂ, ಹಾಗೆಂಬುದನ್ನು ಕೇಳಲಾರದಷ್ಟು ನಿಷ್ಕ್ರಿಯನಾಗಿ ಹೋಗಿದ್ದಾನೆ ಆತ.
ಮಧ್ಯಾಹ್ನದ ಊಟಕ್ಕೆಂದು ಛೇಂಬರ್ನಿಂದ ಹೊರಬಂದ ನಂತರ ಅಕ್ಕಪಕ್ಕದ ಕಚೇರಿಯ ಬಹುಪಾಲು ಜನ ಆಗಲೇ ಮನೆಗೆ ಹೊರಟು ಹೋಗಿದ್ದುದು ತಿಳಿಯಿತು... ನಗರದ ಎಲ್ಲೆಲ್ಲೋ ಏಳೆಂಟು ಕಡೆ ಬಾಂಬ್ ಸಿಡಿದಿದೆಯಂತೆ... ಎಷ್ಟೋ ಜನ ಸತ್ತು ಹೋಗಿದ್ದಾರಂತೆ... ಇನ್ನೆಷ್ಟೋ ಜನ ಗಾಯಗೊಂಡಿದ್ದಾರಂತೆ ಎಂಬ ಸುದ್ದಿ... ಎಲ್ಲಿ, ಎಷ್ಟು ಜನ ಇತ್ಯಾದಿ ಯಾವುದೇ ಸ್ಪಷ್ಟ ಮಾಹಿತಿ ಇಲ್ಲ... ಬಾಂಬನ್ನು ಮುಸ್ಲಿಮರೇ ಸಿಡಿಸಿದ್ದಾರೆಂದು ಹಿಂದೂಗಳು, ತಮಗೆ ಅಪಪ್ರಚಾರ ತರಲು ಹಿಂದೂಗಳೇ ಸಿಡಿಸಿರುವುದೆಂದು ಮುಸ್ಲಿಮರೂ ಪರಸ್ಪರ ಗುಂಪುಗೂಡಿ ದಾಂಧಲೆ ನಡೆಸಿದ್ದಾರಂತೆ... ಅದು ಹಿಂದೂ- ಮುಸ್ಲಿಂ ಗಲಾಟೆಯಾಗಿ ಪರಿವರ್ತನೆಯಾಗಿದೆಯಂತೆ...
ಗಲಿಬಿಲಿಗೊಂಡಿದ್ದ ಸಹೋದ್ಯೋಗಿಗಳೆಲ್ಲ ಎಲ್ಲಾ ಕಡೆ ಸ್ಕೂಲು, ಕಾಲೇಜು, ಆಫೀಸುಗಳು ರಜೆ ಘೋಷಿಸಿರುವುದಾಗಿಯೂ, ಬಾಸ್ ಬಳಿ ಹೋಗಿ ನಾವೂ ಮನೆಗೆ ಹೋಗಲು ಅನುಮತಿ ನೀಡುವಂತೆ ಕೋರಬೇಕೆಂದು ತೀರ್ಮಾನಿಸಿ, ಒಟ್ಟಿಗೇ ಆತನ ಛೇಂಬರ್ನೊಳಕ್ಕೆ ಹೊರಟೆವು. ಏನನ್ನೂ ಕೇಳಲು ಸಿದ್ಧನಿಲ್ಲದ ಆತ ಎಲ್ಲರನ್ನೂ ಏಕಾಏಕಿ ಗದರಿಸಿಬಿಟ್ಟ. ನಮ್ಮೊಂದಿಗಿದ್ದ ಮಹಿಳಾ ಸಹೋದ್ಯೋಗಿಯೊಬ್ಬರು, 'ನಿಮಗಂತೂ ಹೆಂಡತಿ, ಮಕ್ಕಳನ್ನ ನೋಡಿಕೋಬೇಕು; ಊಟ, ತಿಂಡಿ ತಯಾರಿಸಬೇಕು ಅಂತ ಚಿಂತೆಯಿರಲ್ಲ ಸರ್... ಅದಕ್ಕೆಲ್ಲಾ ಕೈಗೊಬ್ಬರು ಕಾಲಿಗೊಬ್ಬರು ಅಂತ ಆಳು- ಕಾಳುಗಳಿರ್ತಾರೆ... ಮನೆಗೆ ಹೋಗೋಕ್ಕೆ ಕಾರಿದೆ, ಕಾರಿಗೊಬ್ಬ ಡ್ರೈವರ್ ಇದ್ದಾನೆ... ಆದರೆ ನಮಗೆ? ನಮ್ಮದನ್ನ ನಾವೇ ಮಾಡ್ಕೋಬೇಕು. ಮನೆಗೆ ಸಿಟಿ ಬಸ್ ಹಿಡಿದು ಹೋಗಬೇಕು. ಇವತ್ತು ಬಸ್ಗಳೂ ಇದ್ದಾವೋ ಇಲ್ಲವೋ ಗೊತ್ತಿಲ್ಲ... ಮಕ್ಕಳು ಸ್ಕೂಲಿಗೋಗಿರೋವು ಮನೆಗೆ ಬಂದವೋ ಇಲ್ಲವೋ ಗೊತ್ತಿಲ್ಲ...' ಎಂದವಳು ಒಂದು ಕ್ಷಣ ನಿಲ್ಲಿಸಿ, 'ಅವು ಬದುಕಿದ್ದಾವೋ ಸತ್ತಿದ್ದಾವೋ ಅಂತನೂ ಗೊತ್ತಿಲ್ಲ...' ಎಂದು ಬಿಕ್ಕಿ- ಬಿಕ್ಕಿ ಅಳಲಾರಂಭಿಸಿದಳು..
ಆಗಲೇ ನನಗೆ ನಮ್ಮ ಮಕ್ಕಳೂ ಬೆಳಗ್ಗೆ ಶಾಲೆಗೆ ಹೋಗಿದ್ದು ನೆನಪಾದದ್ದು.
'ಕೆಲಸ ನಿಲ್ಲಿಸಿ ಮನೆಗೆ ಹೋದರೆ, ಯಾರಿಗೂ ರಜೆ ಮಂಜೂರು ಮಾಡದೇ ಎಲ್ಲರಿಗೂ ಎಲ್.ಡಬ್ಲ್ಯು.ಎ. ಮಾಡುತ್ತೇನೆ'ಂಬ ರಾಕ್ಷಸ ಗಾತ್ರದ ಬಾಸ್ನ ಮಾತಿಗೆ ಎಲ್ಲರೂ ಹೆದರಿ, ಮನಸ್ಸಿಟ್ಟು ಯಾರೂ ಕೆಲಸ ಮಾಡದಿದ್ದರೂ, ಸಂಜೆ ಐದೂವರೆಯಾಗುವುದನ್ನೇ ಕಾಯುತ್ತಾ, ಎಲ್ಲರೂ ಬಾಸ್ನ ವರ್ತನೆಯನ್ನು ಖಂಡಿಸುತ್ತ ತಮ್ಮ- ತಮ್ಮೊಳಗೆ ತವಕಿಸುತ್ತ ಕೂತುಬಿಟ್ಟರು.
ಹಿಂದೆ, ಏನಾದರೂ ತೊಂದರೆ ಆದಾಗ ಮಕ್ಕಳು ನನ್ನ ಮೊಬೈಲಿಗೆ ಫೋನ್ ಮಾಡುತ್ತಿದ್ದುದು ನೆನಪಾಗಿ, ಆಗಲೇ ನನ್ನ ಮಕ್ಕಳೇ ಏನಾದರೂ ಫೋನ್ ಮಾಡಿದ್ದರೋ ಏನೋ ಎಂದು ಆತಂಕಗೊಂಡು, ಏಳೆಂಟು ಸಲ ಮಿಸ್ ಕಾಲ್ ಬಂದಿದ್ದ ಆ ನಂಬರಿಗೆ ಪ್ರಯತ್ನಿಸಿದೆ. ಔಟ್ ಆಫ್ ರೀಚ್ ಅಂತ ಬಂತು. ಕೊನೆಗೆ ಕಣ್ಣ ಮುಂದೇ ಇದ್ದ ಕಚೇರಿ ಫೋನಿಗೂ ಪ್ರಯತ್ನಿಸಿ ನೋಡಿದೆ. ಮತ್ತದೇ ಔಟ್ ಆಫ್ ರೀಚ್ ಎಂಬ ಡೈಲಾಗು... 'ಮೊಬೈಲ್ ಆದರೆ ಔಟ್ ಆಫ್ ರೀಚ್ ಆಗಬಹುದು. ಆದರೆ ಲ್ಯಾಂಡ್ ಫೋನೂ ಇತ್ತೀಚೆಗೆ ಔಟ್ ಆಫ್ ರೀಚ್ ಆಗ್ತಾಯಿದೆ...' ಎಂದೂ, ಆ ಪದಕ್ಕಿರುವ ವಿವಿಧ ಅರ್ಥ ಸಾಧ್ಯತೆಗಳನ್ನು ಪರಿಶೀಲಿಸಬೇಕೆಂದೂ ಸಹೋದ್ಯೋಗಿಗಳೊಂದಿಗೆ ತಮಾಷೆ ಮಾಡಿ ನಕ್ಕರೂ ಏನೋ ಅವ್ಯಕ್ತ ಆತಂಕ ಮನಸ್ಸಿನಲ್ಲೇ ಮಡುಗಟ್ಟಲಾರಂಭಿಸಿತು.
***
ಐದೂವರೆ ಅಗುತ್ತಿದ್ದಂತೆಯೇ ಒಂದು ಸೆಕೆಂಡೂ ಕಾಯದವನಂತೆ ಸೀದಾ ಮನೆಗೆ ನುಗ್ಗಿ ಬಂದೆ... ರಸ್ತೆ ಪೂರ್ತಿ ಮೌನ ಆವರಿಸಿತ್ತು, ಅಘೋಷಿತ ಕರ್ಫ್ಯೂ ವಿಧಿಸಿದಂತೆ. ಅಲ್ಲಲ್ಲಿ ಕೆಲವು ಜನರು ಗುಂಪುಗೂಡಿ ಮಾತನಾಡುತ್ತಿದ್ದುದನ್ನು ಬಿಟ್ಟರೆ, ಬಹುಪಾಲು ಎಲ್ಲರೂ ಆಗಲೇ ಅವರವರ ಮನೆ ಸೇರಿಕೊಂಡಿದ್ದರು! ಕಣ್ಣು ಕಟ್ಟಿದ ಕುದುರೆಯಂತೆ ಹಿಂದೆ- ಮುಂದೆ ನೋಡದೆ ಬೈಕನ್ನು ಒಂದೇ ಸಮನೆ ಮನೆಯತ್ತ ಓಡಿಸಲಾರಂಭಿಸಿದೆ.
ದಾರಿಯ ಮಧ್ಯೆ ಒಂದು ಕಡೆ ಯಾರೋ ಡ್ರಾಪ್ ಬೇಕು ಎನ್ನುವಂತೆ ಕೈ ಅಡ್ಡಹಾಕಿದ. ನಾನು ಅದೇ ದಾರಿಯಲ್ಲಿಯೇ ಹೋಗುತ್ತಿದ್ದರೂ ಗಾಡಿಯನ್ನು ನಿಲ್ಲಿಸಿ, ಅವನನ್ನು ಹತ್ತಿಸಿಕೊಳ್ಳುವ ಮತ್ತು ಎಲ್ಲಿಗೆ ಹೋಗಬೇಕೆಂದು ವಿಚಾರಿಸಿ ಅಲ್ಲಿ ಇಳಿಸುವಷ್ಟೂ ವ್ಯವಧಾನ ಇರಲಿಲ್ಲ. ಆದರೆ ದಿಢೀರನೆ ಅಡ್ಡ ಸಿಕ್ಕ ರಸ್ತೆಗುಂಡಿಯನ್ನು ಹಾರಿಸಿಕೊಂಡು ಹೋಗಲು ಸಾಧ್ಯವಾಗದೇ ಅನಿವಾರ್ಯವಾಗಿ ಬ್ರೇಕ್ ಹಾಕಿದೆ. ಅವನ ಬೇಡಿಕೆಗೆ ನಾನು ಸ್ಪಂದಿಸಿಯೇ ನಿಲ್ಲಿಸಿರುವೆನೆಂದು ಭಾವಿಸಿದಂತೆ ಆತ ನನ್ನ ಯಾವ ಅನುಮತಿಗಾಗಿಯೂ ಕಾಯದೇ ಕಾಲು ಎಗರಿಸಿ ಕುಳಿತೇಬಿಟ್ಟ! ಯಾರಾದರೂ ಅಲ್ಲಿ ನಿಧಾನ ಮಾಡಿಯೇ ತೀರುತ್ತಾರೆ ಎಂದು ಮೊದಲೇ ಲೆಕ್ಕಾಚಾರ ಹಾಕಿಯೇ ಬಡ್ಡೀಮಗ ಆ ಜಾಗವನ್ನು ಆರಿಸಿಕೊಂಡಿದ್ದನೆಂದು ಕಾಣುತ್ತದೆ.
ಅವನಿಗೆ ಬೈದು ಕೆಳಗೆ ಇಳಿಸಬೇಕೆಂದು ಎಷ್ಟೇ ಅನ್ನಿಸಿದರೂ, ಅವನೊಂದಿಗೆ ಜಗಳವಾಡಲೂ ಪುರುಸೊತ್ತಿಲ್ಲವೆನ್ನಿಸಿ ಸುಮ್ಮನೇ ಗಾಡಿ ಚಲಾಯಿಸಿದೆ. ಏನೇನೋ ಆಲೋಚನೆಗಳು... ಬಾಂಬ್ ಸ್ಫೋಟ ಸಂಬಂಧ ನಗರದೊಳಗೆ ಏನೇನು ಸುದ್ದಿ ಹರಡಿದೆಯೋ ಗೊತ್ತಿಲ್ಲ... ಹಿಂದೂ- ಮುಸ್ಲಿಂ ಗಲಾಟೆ ಏನಾದರೂ ಸಂಭವಿಸುತ್ತಿದೆಯೋ ಗೊತ್ತಿಲ್ಲ... ಅವನನ್ನು ಮೇಲು ನೋಟಕ್ಕೇ ಮುಸಲ್ಮಾನನೆಂದು ಗುರುತಿಸಬಹುದಾಗಿತ್ತು.. ಅವನ ಕೈಯಲ್ಲಿ ಒಂದು ಚೀಲ ಬೇರೆ ಇತ್ತು. ಬಹುಶಃ ಅದರಲ್ಲಿ ಮಚ್ಚೋ, ಲಾಂಗೋ ಇರಬಹುದು... ಅವನು ಯಾರನ್ನೋ ಕೊಲೆ ಮಾಡಲು ಹೋಗುತ್ತಿರಬಹುದು... ಯಾರನ್ನೋ ಯಾಕೆ, ಯಾರು ಸಿಕ್ಕುತ್ತಾರೋ ಅವರನ್ನು ಕೊಲ್ಲಬಹುದು... ಕೊಲ್ಲಲು ಕಾರಣ ಬೇಕಿಲ್ಲ, ನಾನು ಮುಸ್ಲಿಂ ಅಲ್ಲದಿರುವುದೊಂದೇ ಸಾಕಾಗಬಹುದು... ಮುಖದ ತುಂಬಾ ಹೆಲ್ಮೆಟ್ ಆವರಿಸಿರುವುದರಿಂದ ಬಹುಶಃ ನಾನು ಯಾವ ಧರ್ಮದವನೆಂದು ಅವನಿಗೆ ಗೊತ್ತಾಗಿರಲಿಕ್ಕಿಲ್ಲ ಎಂಬ ಧೈರ್ಯ ಒಂದು ಕಡೆ. ಆದರೆ ಅವನು ಹೇಗಾದರೂ ನನ್ನನ್ನು ಗುರುತಿಸುವ ಸಾಧ್ಯತೆಯಿತ್ತು. ಬೇಕೆಂದೇ ನಾನು ಒಂದೇ ಒಂದು ಮಾತಾಡಲಿಲ್ಲ. ಮಾತಾಡಿದರೆ ಉರ್ದು ಅಲ್ಲದ ನನ್ನ ಭಾಷೆಯಿಂದಾಗಿಯಾದರೂ ನಾನು ಯಾರೆಂದು ಗೊತ್ತಾಗಿಬಿಡುತ್ತದೆಯೇನೋ ಎಂಬ ಆತಂಕ... ಮುಂದೆ ದಾರಿ ನೋಡಿಕೊಂಡು ಗಾಡಿ ಓಡಿಸುವುದಕ್ಕಿಂತ ಬೈಕಿನ ಹಿಂದಿನ ಸೀಟಿನಲ್ಲಿ ಕುಳಿತ ಆತ ಯಾವ ಕ್ಷಣದಲ್ಲಿ ನನ್ನ ಕುತ್ತಿಗೆಯನ್ನು ಎಗರಿಸಿಬಿಡುತ್ತಾನೋ ಎಂಬ ಆತಂಕ... ಬಹುಶಃ ಗಾಡಿ ನಿಲ್ಲಿಸುವವರೆಗಾದರೂ ಆತ ಹಾಗೆ ಮಾಡಲಿಕ್ಕಿಲ್ಲ, ಏಕೆಂದರೆ ಆತನೂ ಬೀಳುವ ಸಾಧ್ಯತೆಯಿರುತ್ತದಲ್ಲ!
ಶಿವಮೊಗ್ಗದಲ್ಲಿ ಓದುತ್ತಿದ್ದಾಗ ೧೯೮೦ರಲ್ಲಿ ಹಿಂದೂ- ಮುಸ್ಲಿಂ ಗಲಾಟೆಯಾದಾಗ ನನ್ನ ಹೈಸ್ಕೂಲಿನ ಮೇಸ್ಟರೊಬ್ಬರನ್ನು, ಹೀಗೇ ಡ್ರಾಪ್ ಕೇಳುವ ನೆಪದಲ್ಲಿ ಅವರ ಸ್ಕೂಟರ್ನಲ್ಲಿ ಕೂತು, ನಿರ್ಜನ ಪ್ರದೇಶದಲ್ಲಿ ಇಳಿಯುತ್ತೇನೆಂದು ಹೇಳಿ, ನಿಲ್ಲಿಸಿದ ತಕ್ಷಣ ಅವರ ತಲೆಯನ್ನು ಹಾರಿಸಿ ಕೊಲೆ ಮಾಡಿದ್ದು ಬೇಡವೆಂದರೂ ನೆನಪಿಗೆ ಬಂದು ನಡುಕ ಹುಟ್ಟಿತು... ೧೯೯೦ರಲ್ಲಿ ದಾವಣಗೆರೆಯಲ್ಲಿ ಉದ್ಯೋಗ ಮಾಡುತ್ತಿದ್ದಾಗ ಹಿಂದೂ- ಮುಸ್ಲಿಂ ಗಲಾಟೆಯಾಗಿ, ಇಡೀ ಊರು ರಣರಂಗದಂತಾಗಿ ಒಂಟಿ ಸಿಕ್ಕ ಹಿಂದೂಗಳನೇಕರನ್ನು ಕೊಚ್ಚಿ ಕೊಚ್ಚಿ ಕೊಂದದ್ದು ಮತ್ತೆ- ಮತ್ತೆ ನೆನಪಿಗೆ ಬರುತ್ತಿತ್ತು. ಎಲ್ಲಾ ಮುಸ್ಲಿಮರೂ ಭಯೋತ್ಪಾದಕರಲ್ಲ, ಆದರೆ ಎಲ್ಲಾ ಭಯೋತ್ಪಾದಕ ಕೃತ್ಯಗಳು ನಡೆಯುವುದೂ ಮುಸಲ್ಮಾನರಿಂದ ಎಂಬ ಒಂದು ಸಾರ್ವತ್ರಿಕ ಅಭಿಪ್ರಾಯ ನನ್ನನ್ನು ಕಂಗೆಡಿಸಿತ್ತು... ಸಾವಿನ ಹೊಸ್ತಿಲಲ್ಲಿರುವ ನನ್ನ ಹೃದಯದ ಬಡಿತ ನನಗೇ ಸ್ಪಷ್ಟವಾಗಿ ಕೇಳಿಸುತ್ತಿತ್ತು... ಈ ನಗರದಲ್ಲಿ ಅಪರಿಚಿತರಾದ ಯಾರನ್ನೂ ಯಾರೂ ನಂಬುವುದಿಲ್ಲ. ಅಂಥದರಲ್ಲಿ ನಾನು ಯಾಕಾದರೂ ಅವನನ್ನು ಕೂರಿಸಿಕೊಂಡೆನೋ ಎಂದು ಹಪಹಪಿಸಿಕೊಂಡೆ. ಇಲ್ಲೇ ಯಾವುದಾದರೂ ಕ್ರಾಸಿನಲ್ಲಿ ನಾನು ಹೋಗಬೇಕಾಗಿದೆಯೆಂದು ಹೇಳಿ ಅವನನ್ನು ಇಳಿಸಿಬಿಟ್ಟರೆ ಹೇಗೆ ಎಂದುಕೊಂಡೆ. ಅದೂ ಅಪಾಯ... ಎಲ್ಲಾದರೂ ಜನರ ಗುಂಪು ಕಂಡ ತಕ್ಷಣ ಅವನನ್ನು ಇಳಿಸಿಬಿಡಬೇಕೆಂದು, ಆಗ ಅವನು ನನ್ನ ಮೇಲೆ ಆಕ್ರಮಣ ಮಾಡುವ ಸಾಧ್ಯತೆ ಕಡಿಮೆ ಇರುತ್ತದೆ ಎಂದು ನಿರ್ಧರಿಸಿದೆ.. ಮನಸ್ಸಿನ ಈ ಹೊಯ್ದಾಟದಲ್ಲಿ ನಾನು ಬೈಕನ್ನು ನಿಯಂತ್ರಿಸಲು ಪ್ರಯಾಸ ಪಡುತ್ತಿದ್ದುದು ಅವನಿಗೂ ಗೊತ್ತಾಗಿರಬೇಕು...
ಅಂದುಕೊಂಡಂತೆ ಸರ್ಕಲ್ವೊಂದರಲ್ಲಿ ಎಂಟ್ಹತ್ತು ಜನರಿದ್ದ ಕಡೆ ನಿಧಾನ ಮಾಡಿ ಇಳಿಯುವಂತೆ ಸನ್ನೆ ಮಾಡಿದೆ. ಅವನು ಕೆಳಗೆ ಕಾಲಿಡುತ್ತಿದ್ದಂತೆಯೇ ಎಲ್ಲಿ ಕತ್ತಿಯ ಏಟು ನನ್ನ ಕುತ್ತಿಗೆಯ ಮೇಲೆ ಬಿದ್ದೀತೋ ಎನ್ನುವಂತೆ ಏಕದಂ ಗಾಡಿಯ ಆಕ್ಸಿಲೇಟರನ್ನು ತಿರುವಿದೆ. ಅಷ್ಟರಲ್ಲಿ ಜನ ಹೋಯ್ ಎಂದು ನನ್ನತ್ತ ಓಡಿಬರಲಾರಂಭಿಸಿದ್ದರು... ಅವರ ಕೈಯ್ಯಲ್ಲಿ ಆಯುಧಗಳಿದ್ದವು... ಅಷ್ಟು ದೂರ ಬಂದು ಇನ್ನೂ ಯಾರಾದರೂ ನನ್ನತ್ತ ಓಡಿಬರುತ್ತಿರುವರೇನೋ ಎಂದು ತಿರುಗಿ ನೋಡಿದೆ. ನನ್ನ ಜೊತೆ ಬೈಕಿನಲ್ಲಿ ಬಂದಾತ ಅವರನ್ನೆಲ್ಲಾ ತಡೆದು ಅಡ್ಡಗಟ್ಟುತ್ತಿದ್ದ!
***
ಮನೆಗೆ ಕಾಲಿಡುತ್ತಿದ್ದಂತೆಯೇ ಹೆಂಡತಿ ಸ್ಫೋಟಗೊಂಡವಳಂತೆ, 'ಒಂದು ಫೋನ್ ಮಾಡಕ್ಕೂ ನೆನಪಾಗಲಿಲ್ಲವಾ?' ಎಂದಷ್ಟೇ ಅಂದವಳಿಗೆ ಮುಂದೆ ಮಾತನಾಡಲು ಸಾಧ್ಯವಾಗದೇ ಅಳಲು ಶುರು ಮಾಡಿದಳು. ಫೋನ್ ಜಾಮ್ ಆಗಿರುವ ವಿಚಾರ ಅವಳಿಗೇನು ಗೊತ್ತು. ಆಕೆಗೆ ನನ್ನ ಫೋನೂ ಸಿಕ್ಕಿರಲಿಲ್ಲ.
ಅಳುತ್ತಿದ್ದ ಐದನೇ ತರಗತಿಯಲ್ಲಿ ಓದುತ್ತಿದ್ದ ಮಗಳು, ಗಲಾಟೆಯಾಗುತ್ತಿದ್ದಂತೆಯೇ ಶಾಲೆ ಬಿಟ್ಟಿತೆಂದೂ, ತಮ್ಮನನ್ನು ಜೊತೆ ಮಾಡಿಕೊಂಡು ಹೊರಗೆ ಬಂದು ಅಂಗಡಿಯವನ ಬಳಿಯೇ, ಅಪ್ಪ ಬಂದ ತಕ್ಷಣ ದುಡ್ಡು ಕೊಡಿಸುವುದಾಗಿ ಹೇಳಿ ಒಂದು ರೂಪಾಯಿ ಪಡೆದು, ಕಾಯಿನ್ ಬೂತಿನಿಂದ ಫೋನು ಮಾಡಿದ್ದಾಗಿಯೂ, ನಾನು ಎತ್ತಲಿಲ್ಲವೆಂತಲೂ, ಸ್ಕೂಲ್ಗೆ ಡ್ರಾಪ್ ಕೊಡುತ್ತಿದ್ದ ವ್ಯಾನ್ನವನಿಗೆ ಅಷ್ಟು ಬೇಗ ಶಾಲೆ ಬಿಡುವ ವಿಚಾರ ತಿಳಿಯದೇ ಅವನೂ ಬಂದಿರಲಿಲ್ಲವೆಂತಲೂ, ಇನ್ನೇನೂ ದಾರಿ ತೋರದೇ ಐದಾರು ಕಿಲೋಮೀಟರ್ ದೂರದಲ್ಲಿದ್ದ ಮನೆಗೆ ಒಂದನೇ ಕ್ಲಾಸ್ನಲ್ಲಿ ಓದುತ್ತಿದ್ದ ತಮ್ಮನನ್ನು ಜೊತೆಗಿಟ್ಟುಕೊಂಡು ನಡೆದುಕೊಂಡು ಬರುವಾಗ, ಒಂದು ಕಡೆ ಜನರ ಗುಂಪೊಂದು ಅವರ ಮೇಲೆ ನುಗ್ಗಿ ಬಂದಾಗ ಇಬ್ಬರೂ ಗಾಬರಿಗೊಂಡು ಚದುರಿ ಹೋದದ್ದಾಗಿಯೂ, ಎಷ್ಟು ಹುಡುಕಿದರೂ ತಮ್ಮ ಕಾಣಲಿಲ್ಲವೆಂತಲೂ, ತನಗೆ ಭಯವಾಗಿ ಮನೆಯಲ್ಲಿ ಹೇಳಲು ಬಂದದ್ದಾಗಿಯೂ ವರದಿ ಒಪ್ಪಿಸಿದಳು.
'ತನ್ನದು ತಪ್ಪಾಯಿತು, ಇನ್ನೊಂದ್ಸಲ ಹಿಂಗೆ ಮಾಡಲ್ಲ, ಹೊಡೆಯಬೇಡಿ'ರೆಂದು ಅಸಹಾಯಕತೆಯಿಂದ ನಡುಗುತ್ತಾ ಅವಳು ಬೇಡಿಕೊಳ್ಳುತ್ತಿದ್ದುದನ್ನು ನೋಡಿ, 'ಇಲ್ಲಮ್ಮ, ಖಂಡಿತ ಹೊಡೆಯಲ್ಲ...' ಅಂತ ಗದ್ಗದಿತನಾಗಿ ಅವಳನ್ನು ತಬ್ಬಿಕೊಂಡು ಸಮಾಧಾನಿಸಿದೆ.
ಅದೊಂದು ಫೋನ್ ಕಾಲನ್ನು ರಿಸೀವ್ ಮಾಡಿದ್ದರೆ ಹೀಗೆಲ್ಲ ಆಗುತ್ತಿರಲಿಲ್ಲವೇನೋ ಅನಿಸಿತು... ಯಾಕೋ ಅವಳ ಜೊತೆ ನನಗೂ ಅಳು ಬರುವಂತಾಯಿತು. ಒಂದು ವೇಳೆ ನಾನೇ ಹಾಗೆ ಮಾಡಿದರೆ ಮನೆಯವರೆಲ್ಲ ಎದೆಗುಂದುವರೆಂದು ಭಾವಿಸಿ, ಪೊಲೀಸ್ಗೆ ಕಂಪ್ಲೆಂಟ್ ಮಾಡಿ, ಹುಡುಕಿಕೊಂಡು ಕರೆತರುವುದಾಗಿ ಧೈರ್ಯ ಹೇಳಿ ಮನೆಯಿಂದ ಹೊರಟೆ. ಈಗಷ್ಟೇ ಸಾವಿನ ಮನೆಯಿಂದ ತಪ್ಪಿಸಿಕೊಂಡು ಬಂದಿದ್ದರೂ ನನ್ನ ಕರುಳಿನ ಅವಿಭಾಜ್ಯ ಅಂಗವನ್ನು ರಕ್ಷಿಸಬೇಕೆನ್ನುವ ಉಮೇದಿನಲ್ಲಿ ಅದು ಮರೆತೇ ಹೋಗಿತ್ತು.
ಆಗಲೇ ಕತ್ತಲೆ ಆವರಿಸಿತ್ತು. ಡ್ಯೂಟಿ ಮೇಲಿದ್ದ ಪೊಲೀಸ್, 'ಬಾಂಬ್ ಗಲಾಟೆಯಲ್ಲಿ ಸತ್ತಿರುವವರ ಬಗ್ಗೆಯೇ ಇನ್ನೂ ಕೇಸ್ ರಿಜಿಸ್ಟರ್ ಮಾಡಕ್ಕಾಗಿಲ್ಲ; ಅಂತಹದರಲ್ಲಿ ಕಳೆದುಹೋಗಿರೋ ಕೇಸು ತಂದಿದ್ದೀರಲ್ರೀ' ಅಂತ ಅಸಹನೆ ತೋರಿದ. ಇದುವರೆಗೆ ಯಾವುದೇ ಮಕ್ಕಳ ಟ್ರೇಸಿಂಗ್ ಕೇಸು ಬರದುದರಿಂದ ನನ್ನ ಕೇಸನ್ನು ರಿಜಿಸ್ಟರ್ ಮಾಡಿಕೊಂಡು, ಅಡ್ಡಗೋಡೆ ಮೇಲೆ ದೀಪ ಇಟ್ಟಂತೆ ಮಾತನಾಡಿ, 'ಸಿಕ್ಕರೆ ವಿಷಯ ತಿಳಿಸಿ' ಎಂದು ನನಗೇ ಹೇಳಿ ಜಾರಿಕೊಂಡ.
ಆತನ ಶಾಲೆಯ ದಾರಿ ಹಿಡಿದು, ಆತ ತಪ್ಪಿಸಿಕೊಂಡದ್ದಾಗಿ ಮಗಳು ಹೇಳಿದ ಜಾಗದ ಜಾಡು ಹಿಡಿದು ಅಕ್ಕ- ಪಕ್ಕದವರನ್ನೆಲ್ಲಾ ವಿಚಾರಿಸುತ್ತಾ ನಡೆದೆ. ನಡೆದೆ... ನಡೆದೆ... ನಡೆದೆ.... ಹತ್ತಾರು ಕಿಲೋಮೀಟರ್ ದೂರ ಸುತ್ತಿದೆ. ಹಿಂದೂ- ಮುಸ್ಲಿಂ ಗಲಭೆ ಆಗಿರುವ ರಾತ್ರಿ ಬೇರೆ... ಎಲ್ಲಾ ಕಡೆ ನೀರವ ಮೌನ... ಬಹುಶಃ ಆ ಗಲಭೆಯ ತೀವ್ರತೆ ಈ ಭಾಗದಲ್ಲಿ ಕಡಿಮೆಯಿರುವುದರಿಂದ ಇಲ್ಲಿ ಕರ್ಫ್ಯೂ ವಿಧಿಸಿರಲಿಲ್ಲವೆಂದು ಕಾಣುತ್ತದೆ...
ರಾತ್ರಿ ಹನ್ನೆರಡಾದರೂ ಯಾವ ಸುಳಿವೂ ಸಿಗಲಿಲ್ಲ. ನಾನೇ ದಾರಿ ತಪ್ಪಿಸಿಕೊಂಡ ಅನುಭವ. ಮನೆಗೆ ಫೋನ್ ಮಾಡೋಣವೆಂದು ಹತ್ತಾರು ಸಲ ಪ್ರಯತ್ನಿಸಿದರೂ ಪ್ರಯೋಜನವಾಗಲಿಲ್ಲ. ಯಾರಿಗಾದರೂ ಅವನು ಸಿಕ್ಕು, ಹಣಕ್ಕಾಗಿ ಏನಾದರೂ ಬೇಡಿಕೆ ಇಡುವರೇನೋ ಎಂಬ ಆತಂಕ ಒಂದು ಕಡೆ... ಸದ್ಯ, ಮಗಳು ಬಾಂಬ್ ಘಟನೆ ಆದ ನಂತರವೂ ತನ್ನ ಜೊತೆಗಿದ್ದನೆಂದು ಹೇಳಿದ್ದರಿಂದ ಆತನ ಜೀವಕ್ಕೇನೂ ಅಪಾಯವಾಗಿಲ್ಲವೆಂಬ ಸಮಾಧಾನ ಇನ್ನೊಂದು ಕಡೆ. ಆದರೂ...
***
ಬರಿಗೈಲಿ ಹಿಂದಿರುಗಿ ಮನೆಗೆ ಬಂದಾಗ ಅವನಿಲ್ಲದ ಮನೆಯಲ್ಲಿ ಗಾಢಾಂಧಕಾರ ಕವಿದಿತ್ತು. ಅವನ ಅಜ್ಜ, ಅಜ್ಜಿಯ ಜೊತೆ ನನ್ನ ಹೆಂಡತಿಯೂ ಅತ್ತೂ- ಅತ್ತೂ ಕಣ್ಣು ಕೆಂಪಗೆ ಮಾಡಿಕೊಂಡು, ಕಣ್ಣ ನೀರೆಲ್ಲಾ ಹಿಂಗಿಹೋಗಿ, ಊಟ- ತಿಂಡಿ ಎಲ್ಲವನ್ನೂ ಬಿಟ್ಟು ಸುಸ್ತಾಗಿ ಕುಸಿದು ಕುಳಿತಿದ್ದರು. ಒಬ್ಬೊಬ್ಬರದು ಒಂದೊಂದು ಥರದ ಆಲಾಪನೆಗಳು.. ಏನೇನೋ ಕನವರಿಕೆಗಳು... ಅವನು ಹುಟ್ಟಿದಾಗಿನಿಂದ ಈವರೆಗಿನ ಬಾಲಲೀಲೆಗಳ ಗುಣಗಾನ... ನನ್ನಂತೆಯೇ ಹುಡುಕಲು ಹೋಗಿದ್ದ ಇನ್ನೂ ಮೂರು ನಾಲ್ಕು ಜನ ಸಂಬಂಧಿಕರೂ- ಸೀತೆಯನ್ನು ಹುಡುಕಲಾರದೇ ವಾಪಸು ಬಂದ ವಾನರರಂತೆ ಸಪ್ಪೆ ಮೋರೆ ಹಾಕಿಕೊಂಡು- ಹಿಂದಿರುಗಿದ್ದರು.
ಮಲಗಿದಾಗ ರಾತ್ರಿ ಎರಡಾಗಿತ್ತು. ಮತ್ತೆ ನಾಲ್ಕೂವರೆಗೇ ಎದ್ದು ಮುಖ ತೊಳೆದು ಹುಡುಕಲು ಹೊರಡೋಣವೆಂದು ಹೊರಡಲು ತಯಾರಾಗುತ್ತಿದ್ದೆ. ಬೈಕನ್ನು ಹೊರತೆಗೆದು ಹೆಲ್ಮೆಟ್ ಹಾಕಿಕೊಂಡು ಇನ್ನೇನು ಕಿಕ್ ಹೊಡೆಯಬೇಕೆನ್ನುವಷ್ಟರಲ್ಲಿ ಅಷ್ಟು ದೂರದಲ್ಲಿ ಲೈಟ್ ಹಾಕಿಕೊಂಡ ಒಂದು ಹಳೆಯ ಸ್ಕೂಟರ್ ಇತ್ತಲೇ ಬರುವುದು ಕಂಡಿತು. ನಿಧಾನಿಸಿದೆ... ಮೈತುಂಬಾ ಸ್ವೆಟರ್ ಹೊದ್ದು, ಸ್ಕೂಟರ್ನ ಮುಂದೆ ನಿಂತಿದ್ದ ಮಗುವೊಂದು ಆತನಿಗೆ ಏನನ್ನೋ ಹೇಳಿ ಆತ ಸ್ಕೂಟರ್ ನಿಲ್ಲಿಸಿದ. ನೋಡಿದರೆ ನನ್ನದೇ ಮಗು!
ಖುಷಿಯಿಂದ ನಾನೂ ಬೈಕ್ನ್ನು ನಿಲ್ಲಿಸಿ ಕೆಳಗಿಳಿದೆ... ಸಾವಿನ ಮನೆಯಿಂದ ತಪ್ಪಿಸಿಕೊಂಡು ಬಂದವನಂತೆ ಓಡಿಬಂದ ಮಗ ಛಂಗನೆ ನನ್ನ ಎತ್ತರಕ್ಕೂ ಜಿಗಿದು, ಕಾಲಲ್ಲಿ ಸೊಂಟವನ್ನು ಬಳಸಿ, ಕುತ್ತಿಗೆಯನ್ನು ಬಿಗಿಹಿಡಿದುಕೊಂಡ.
'ನಮ್ದುಕ್ಕೆ ಮನೆ ಹತ್ರ ರಾತ್ರೆ ಮಗು ಅಳ್ತಾ ನಿಂತಿತ್ತು. ನಮ್ದು ಹೆಂಡ್ತಿ ಕರಕೊಂಡು ಬಂದು ರಾತ್ರೆ ಊಟ ಮಾಡ್ಸಿ ಮಲುಗಿಸ್ತು. ಬೆಳಗ್ಗೆ ನಮಾಜ್ಗೆ ಹೋಗೋಕ್ಕೆ ಮುಂಚೆ, ನಿಮ್ದು ಮಗೂನ ಬಿಟ್ಟು ಹೋಗನಾ ಅಂತ ಬಂದೆ...' ಎಂದಷ್ಟೇ ಹೇಳಿ ನಮಾಜ್ಗೆ ತೆರಳಲು ತಡವಾಗುತ್ತದೆಂದು ಹೊರಟುಬಿಟ್ಟ. ಆತಂಕದಲ್ಲಿರುವ ಪೋಷಕರ ಮನೆಗೆ ಬೇಗ ತಲುಪಿಸಿಬಿಡಬೇಕೆಂದು ಪಾಪ ಮಗನ ಶಾಲೆಯ ಬಳಿಗೆ ಹೋಗಿ, ಅಲ್ಲಿಂದಲೇ ಅವನು ತೋರಿಸುತ್ತಾ ಬಂದ ದಾರಿಯನ್ನು ಅನುಸರಿಸಿ ಆತ ಕರೆದುಕೊಂಡು ಬಂದುದಾಗಿ ಮಗ ಹೇಳಿದ. ಮನೆಯವರಿಗೆಲ್ಲ ಹೃದಯ ತುಂಬಿ ಬಂದು ಆತನನ್ನು ದೇವರ ರೂಪದಲ್ಲಿ ಬಂದವನೆಂಬಂತೆ ಕೊಂಡಾಡಿದರು. ಕನಿಷ್ಟ ಆತನ ಮನೆಯ ವಿಳಾಸವನ್ನಾದರೂ ಕೇಳಿ ತಿಳಿದುಕೊಂಡಿದ್ದರೆ, ಆನಂತರವಾದರೂ ಹೋಗಿ ಮಗುವಿಗೆ ಹಾಕಿದ್ದ ಸ್ವೆಟರ್, ಟೋಪಿಯನ್ನು ವಾಪಸ್ ಕೊಟ್ಟು ಒಂದು ಥ್ಯಾಂಕ್ಸ್ ಆದರೂ ಹೇಳಿ ಬರಬಹುದಾಗಿತ್ತಲ್ಲ ಅನಿಸಿತು.
***
ನಿರಾಳಗೊಂಡ ಮಗು ಸುರಕ್ಷತೆಯ ಭಾವ ಬಂದುದರಿಂದ- ಬಹುಶಃ ರಾತ್ರಿಯೆಲ್ಲಾ ಗಾಬರಿಗೊಂಡು ಮಲಗಿರಲಿಲ್ಲವೆಂದು ಕಾಣುತ್ತದೆ- ತಾಯಿಯ ಮಡಿಲನ್ನು ಸೇರಿದಾಕ್ಷಣ ಸುಖ ನಿದ್ರೆಗೆ ಜಾರಿತು. ಹಾಗೇ ಕಣ್ಮುಚ್ಚಿಕೊಂಡ ಮಗುವಿನ ಕೈಹಿಡಿತ ಸಡಿಲಗೊಂಡಾಗ ಕೈಯ್ಯಲ್ಲಿ ಏನೋ ಇರುವುದು ಕಂಡು ಬಿಡಿಸಿ ನೋಡಿದೆ. ಒಂದು ರೂಪಾಯಿಯ ಕಾಯಿನ್! ಫೋನ್ ಮಾಡಲೆಂದು ಕಾಯಿನ್ ಬೂತ್ನವನ ಬಳಿ- ಅಪ್ಪನಿಗೆ ಹೇಳಿ ಕೊಡಿಸುತ್ತೇನೆಂದು- ಕೇಳಿ ಪಡೆದದ್ದು...
ಯಾಕೋ ನನಗರಿಯದೇ ಕಣ್ಣಾಲಿಗಳು ತೇವಗೊಂಡವು.

1 comment:
kaanda magu..hendatiya alu,ee thallanagalu anubhavisidarige maathra gottaguttave.
sogasaada kathe.mobile na prati kareyannu dayamaadi receive maadi please.
srujan
Post a Comment