

ಕಥೆಯ ಬಂಧ ಮೀರುವ ವಾಚಾಳಿತನ
'ತಲ್ಲಣದ ಆ ಕ್ಷಣ'
ಬೆಲೆ: ರೂ.60ಪ್ರಕಾಶನ: ಪ್ರಗತಿ ಗ್ರಾಫಿಕ್ಸ್,
ಬೆಂಗಳೂರು
'ತಲ್ಲಣದ ಆ ಕ್ಷಣ' ಸಮಕಾಲೀನತೆಯ ಬಿಸಿ-ಸಂಬಂಧಗಳ ವಿವಿಧ ಪರಿ
'ತಲ್ಲಣದ ಆ ಕ್ಷಣ' ಕಂನಾಡಿಗಾ ನಾರಾಯಣ ಅವರ ಆರನೆಯ ಕಥಾಸಂಕಲನ. ನಾರಾಯಣ ಅವರು ಇಪ್ಪತ್ತೈದು ವರ್ಷಗಳಿಂದ ಬರವಣಿಗೆಯನ್ನು ರೂಢಿಸಿಕೊಂಡಿದ್ದಾರೆ. ಈ ಅವಧಿಯಲ್ಲಿ ಗಟ್ಟಿಯಾದ ಲೋಕಾನುಭವದ ದ್ರವ್ಯ, ಪ್ರಬುದ್ಧತೆ ಅವರಿಗೆ ದಕ್ಕಿದೆ. ಬರವಣಿಗೆಯಲ್ಲಿ ಕೈಪಳಗಿದೆ. ಪಳಗಿದೆ ಎಂದರೆ ಓತಪ್ರೋತವಾಗಿ ಬರೆಯಬಲ್ಲರು. ಆದರೆ ಕಲಾ ಶಿಸ್ತು, ಸಂಯಮಗಳ ಕೊರತೆಯಿಂದಾಗಿ ಇದು ಅವರ ಶಕ್ತಿಯಾಗದೆ ದೌರ್ಬಲ್ಯವಾಗಿದೆ.
ನಕ್ಸಲೀಯತೆಯಿಂದ ಹಿಡಿದು, ಇಲಿಗೆ ಹೆದರುವ ಹೆಂಡತಿಯವರೆಗೆ ಬದುಕಿನ ಹಲವು ನಮೂನೆಯ ತವಕ-ತಲ್ಲಣಗಳನ್ನು ಧ್ವನಿಸುವ ಈ ಸಂಕಲನದಲ್ಲಿ ಹನ್ನೊಂದು 'ಕಥೆ'ಗಳಿವೆ. ಇವುಗಳ ಪೈಕಿ ಸಮಕಾಲೀನತೆಯ ಬಿಸಿಯಿಂದಾಗಿ ನಮ್ಮನ್ನು ಥಟ್ಟನೆ ಸೆಳೆದುಕೊಳ್ಳುವ ಕಥೆಗಳೆಂದರೆ 'ಇರುವುದೆಲ್ಲವ ಬಿಟ್ಟು', 'ಬೀಜದ ಹೋರಿ', 'ವರ್ತನೆ' ಮತ್ತು 'ಪರಿಭ್ರಮಣ'. ಉಳಿದವು ಸೈ ಎನಿಸಿಕೊಳ್ಳುವುದು ಅವು ಕಾಣಿಸುವ ಮನುಷ್ಯ ಸಂಬಂಧಗಳ ವಿವಿಧ ಪರಿಗಳಿಂದಾಗಿ.
'ಇರುವುದೆಲ್ಲವ ಬಿಟ್ಟು' ಮಲೆನಾಡಿನ ಕಾಲೇಜು ಕನ್ಯೆಯೊಬ್ಬಳು ನಕ್ಸಲ್‌ಬಾರಿಗೆ ಮಾರುಹೋಗಿ, ಕೊನೆಗೆ ವಿವೇಕೋದಯವಾಗಿ ಕಾನೂನಿನ ಚೌಕಟ್ಟಿನೊಳಗೆ ಉಳಿದುಕೊಳ್ಳುವ ತೀರ್ಮಾನಕ್ಕೆ ಬರುವುದನ್ನು ನಿರೂಪಿಸುತ್ತದೆ. ನಾಯಕಿ ನಕ್ಸಲೀಯ ಸಿದ್ಧಾಂತಗಳಿಗೆ ಮಾರುಹೋಗಲು ಪ್ರೇರಣೆ-ಪ್ರಭಾವಗಳೇನು? ಸಾಮಾಜಿಕ ಹಿನ್ನೆಲೆಗಳೇನು? ಎಂಬುದು ಸ್ಪಷ್ಟವಾಗುವುದಿಲ್ಲವಾದರೂ ಕಾಲೇಜಿನ ವಾತಾವರಣ, ವರ್ಣಭೇದ, ಜಾತಿ-ಕೋಮುದಳ್ಳುರಿಗಳನ್ನು 'ಪ್ರೊಜೆಕ್ಟ್' ಮಾಡುವ ಚರ್ಚಾಕೇಂದ್ರಗಳಿಂದಲೋ ಅಥವಾ ಅವಳಲ್ಲೇ ಇದ್ದಿರಬಹುದಾದ ಕ್ರಾಂತಿಯ ಉಮೇದಿನಿಂದಾಗಿಯೋ ನಕ್ಸಲೀಯತೆಯಿಂದ ಪ್ರಭಾವಿತಳಾಗಿರಬಹುದು ಎಂದು ಊಹಿಸಲಡ್ಡಿಯಿಲ್ಲ. ಸ್ವತಃ ಮಾವೋವಾದಿ ಕ್ರಾಂತಿಕಾರಿಯಲ್ಲವಾದರೂ ಮುಕ್ತ ವಿಚಾರಧಾರೆಯ ಪ್ರೊಫೆಸರನ ಪ್ರಭಾವದ ಪರಿಣಾಮವೂ ಇದ್ದೀತು ಎನ್ನಲು ಕಥೆಯ ಒಡಲೊಳಗೇ ಪೂರಕವಾದ ಅಂಶಗಳಿವೆಯಾದ್ದರಿಂದ ಮುಂದೆ ಸಾಗಲು ಅಡ್ಡಿಯಿಲ್ಲ. ಹೀಗೆ, ಬೇಕಾಗಿಯೋ ಅಚಾನಕವಾಗಿಯೋ ನಾಯಕಿ ನಕ್ಸಲೀಯ ಆಂದೋಲನದಲ್ಲಿ ಒಂದು ಮುಳುಗುಹಾಕಿ ಮೇಲೇಳುವ ಕ್ರಿಯೆ-ಪ್ರಕ್ರಿಯೆಗಳಲ್ಲಿ, ಹಿಂಸೆಯೊಂದೇ ಪರಿಹಾರವಲ್ಲ ಎಂಬ ತೀರ್ಮಾನದಲ್ಲಿ ಕಥೆ ಪ್ರಬುದ್ಧತೆಯತ್ತ, ಜೀವನಪ್ರೀತಿಯತ್ತ ವಾಲುತ್ತದೆ. ಇರುವುದೆಲ್ಲವ ಬಿಟ್ಟು, ಕ್ರಾಂತಿಯ ಕನಸಿನ ಲೋಕದತ್ತ ತುಡಿಯುವ, ಮಾನವಶಕ್ತಿ ಪ್ರವಹಿಸುವುದು ಬಂದೂಕಿನ ಮೂಲಕ ಎಂಬ ಭ್ರಮೆಯಲ್ಲಿರುವ ಯುವಶಕ್ತಿಯನ್ನು, 'ಶಕ್ತಿ ಪ್ರವಹಿಸುವುದು ಪ್ರೀತಿಯ ಮೂಲಕ' ಎಂದು ಜೀವಪರವಾಗಿ ಪರಿವರ್ತಿಸುವ ಪ್ರೊಫೆಸರ್ ಪಾತ್ರ ಕಥೆಯ ಆಶಯಕ್ಕೆ ಪೂರಕವಾಗಿ, ಪರಿಣಾಮಕಾರಿಯಾಗಿ ಬಂದಿದೆ. ಭ್ರಮಿತ ಕ್ರಾಂತಿಯ ಕಥೆಯನ್ನು ಹಿಂದಿನ ಜನ್ಮದ ನೆನಪಿನ ಪ್ರವಾಹದ ಮುಳುಗು-ಏಳುಗಳ ಮುಖೇನ ವಿವೇಕದ ದಡ ಮುಟ್ಟಿಸುವುದರಲ್ಲಿ ನಾಟಕೀಯತೆ ವಸ್ತುವಿನ ಚಲನಶೀಲತೆಗೆ ಅನುವಾಗಿ ಒದಗಿಬಂದಿದೆ.
'ಬೀಜದ ಹೋರಿ' ಮಲೆನಾಡಿನ ಗ್ರಾಮವೊಂದರ ಇಬ್ಬರು ಹೋರಿ ಮಾಲೀಕರ ದರ್ಪ-ದವಲತ್ತುಗಳು, ಕ್ರೌರ್ಯ-ಕೇಡುಗಳು ಸಡ್ಡುಹೊಡೆದು ಮುಖಾಮುಖಿಯಾಗುವ ಕಥೆ. ಶಕ್ತಿ, ಪೌರುಷಗಳ ಸಂಕೇತವಾದ ಹೋರಿ, ಹಳ್ಳಿಯ ಇಬ್ಬರು ಶಕ್ತಿವಂತರ ಮೇಲಾಟದಲ್ಲಿ ಒಂದು ದಾಳವಾಗುವ, ಬಲಿಪಶುವಾಗುವ ಇಲ್ಲಿನ ದಾರುಣತೆ ಮನಸ್ಸನ್ನು ಕಲಕುವಂಥದ್ದು. ಪ್ರಜ್ಞಾವಂತ ಮನುಷ್ಯನ ಅಹಂ ಮತ್ತು ಮೂಕಪ್ರಾಣಿಯ ಅಸಹಾಯಕತೆಗಳ ಮಾರ್ಮಿಕ ನಿರೂಪಣೆ ಅನ್ಯೋಕ್ತಿ ರೀತಿಯದು. ಜಗತ್ತನ್ನು ಆಳಬಲ್ಲೆ, ಮಣಿಸಬಲ್ಲೆ ಎಂಬ ಇವತ್ತಿನ ಶಕ್ತಿ ರಾಜಕಾರಣದ ಅಹಂಕಾರಕ್ಕೆ ರೂಪಕವಾಗುವ ಶಕ್ತಿಯುಳ್ಳ ಕಥೆ. ಆದರೆ ಲಾಡೆನ್, ಸದ್ದಾಂ ಹೆಸರುಗಳನ್ನು ಅನಗತ್ಯವಾಗಿ ಆವಾಹಿಸುವ ವಾಚಾಳಿತನದಿಂದಾಗಿ ಒಳ್ಳೆಯ ರೂಪಕ ಕಥೆಯಾಗುವ ಹದ ತಪ್ಪಿ ವಾಚಾಳಿಯಾಗಿದೆ.
'ಪರಿಭ್ರಮಣ' ಇವತ್ತಿನ ರಾಜಕೀಯ ವ್ಯವಸ್ಥೆಯೊಳಗೆ ಮಧ್ಯವರ್ತಿಗಳ ಭ್ರಷ್ಟತನವನ್ನು ಬಯಲುಗೊಳಿಸುತ್ತಲೇ ಅಮಾಯಕರ ಶೀಲಹರಣಮಾಡಿ ಭ್ರಷ್ಟಗೊಳಿಸುವ ಆಘಾತಕಾರಿ ವಸ್ತುಸ್ಥಿತಿಗೆ ಕನ್ನಡಿಯಾಗಿದೆ. ವರ್ಗಾವಣೆ ರದ್ದಿಗಾಗಿ ಮಧ್ಯವರ್ತಿಯೊಬ್ಬನ ಸಹಾಯ ಬಯಸಿ ಹೋಗುವ ಚಂದ್ರಕಾಂತ ಲಂಚ ತೆಗೆದುಕೊಳ್ಳದ-ಲಂಚ ಕೊಡದ ಸಜ್ಜನ. ಸಹಾಯಮಾಡುವ ಮುಖವಾಡದಲ್ಲೇ ಇಂಥ ಸಜ್ಜನರ ಶೀಲವನ್ನು ಹಾಳುಗೆಡಹುವ ಕ್ರೂರಶಕ್ತಿಗಳ ಜಾಲದೆದುರು ಮಾನವಂತ ಬದುಕು ಅಸಹಾಯಕವಾಗುವ ದುರಂತ ಇಲ್ಲಿಯದು. ಮಾನವೀಯತೆ ರೋದಿಸುವ ಈ ಸ್ಥಿತಿಯಿಂದ ಹೊರ ಬರುವುದಾದರೂ ಹೇಗೆ? "ಬೆಳಕು ಹರಿಯುವುದರ ಒಳಗೆ ಅವರು ಯಾವುದಾದರೂ ನಿರ್ಧಾರಕ್ಕೆ ಬರಬೇಕಾಗಿತ್ತು..." -ಕಥೆಯ ಈ ಕೊನೆಯ ಮಾತು ನೈತಿಕತೆಯ ಅಳಿವು-ಉಳಿವುಗಳ ಪ್ರಶ್ನೆಯೇ ಆಗಿ ಬೆಚ್ಚಿಬೀಳುವಂತಾಗುತ್ತದೆ.
'ವರ್ತನೆ' ಮಾತು-ಕೃತಿಗಳಲ್ಲಿ ಮನುಷ್ಯನ ಪ್ರಾಮಾಣಿಕತೆಯನ್ನು ಪುಟಕ್ಕಿಡುವ ಪ್ರಯತ್ನ. ಜಾತಿ-ಮತ-ಶೋಷಣೆ ಮುಕ್ತ ಸಮಾಜದ ಕನಸು ಕಾಣುವ ಯುವಜನಾಂಗದ ದೌರ್ಬಲ್ಯದ ಇನ್ನೊಂದು ಮುಖ ಇಲ್ಲಿದೆ. ಸಾಮಾಜಿಕ ಕ್ರಾಂತಿಯ ಘನ ಆದರ್ಶ ಮತ್ತು ವ್ಯಕ್ತಿಗತ ಕಾಮನೆಗಳ ಮುಖಾಮುಖಿಯಲ್ಲಿ ವ್ಯಕ್ತಿಯ ಕಾಮವಾಂಛಿತ ದೌರ್ಬಲ್ಯವೇ ಮೇಲುಗೈ ಪಡೆಯವುದರಲ್ಲಿ ಕ್ರಾಂತಿಯ ಆಟಾಟೋಪದ ವ್ಯಂಗ್ಯ ಮುಖಕ್ಕೆ ರಾಚುತ್ತದೆ.
ಇವತ್ತಿನ ಸಾಮಾಜಿಕ ಮುಖಗಳನ್ನು ಅನಾವರಣಗೊಳಿಸುವ ಧಾವಂತದಲ್ಲಿ ನಾರಾಯಣರ ಕಥೆಗಳು 'ಬಂಧಮುಕ್ತ'ವಾಗಿ ಲಲಿತ ಪ್ರಬಂಧ-ಹರಟೆಗಳತ್ತ ಜಾರಿಕೊಳ್ಳುವುದೇ ಹೆಚ್ಚು. 'ಸೌಜನ್ಯ', 'ಸಂಬಂಧಗಳು', 'ಐ ಥಿಂಕ್ ಮೈಸ್ ಆರ್ ನೈಸ್' ಕಥೆಗಳು ಮೇಲಿನ ಮಾತಿಗೆ ಉತ್ತಮ ನಿದರ್ಶನಗಳು. ತಲ್ಲಣಗಳ ಮಧ್ಯೆಯೂ ಕಥಾಶಿಲ್ಪದ ಕಾಳಜಿವಹಿಸಿದ್ದಲ್ಲಿ ಕಂನಾಡಿಗಾ ನಾರಾಯಣರು ಒಳ್ಳೆಯ ಕಥೆ ಬರೆಯಬಲ್ಲರು ಎನ್ನುವುದಕ್ಕೆ ನಿದರ್ಶನ ಈ ಸಂಕಲನದ ಅತಿ ಸಣ್ಣಕಥೆ 'ಹಾಲುಮಾರುವ ಹುಡುಗ'. ಮುಗ್ಧತೆ ಹರಿದು ಹದಿಹರೆಯಕ್ಕೆ ಕಾಲಿಡುತ್ತಿರುವ ಹುಡುಗನೊಬ್ಬ ಲೋಕದ ಅನುರಕ್ತಿ-ಆಕ್ರಮಣಗಳಿಗೆ ಒಡ್ಡಿಕೊಳ್ಳಬೇಕಾದ ಅನಿವಾರ್ಯತೆಯ ಮನೋಲಹರಿ ಉಕ್ಕದೆ-ಸೊಕ್ಕದೆ ಮೇಲುಸ್ತರದಲ್ಲೇ ನಮ್ಮ ಮನಮುಟ್ಟುತ್ತದೆ.
ಟಿಎಸ್‌ಐ
ಜಿ.ಎನ್. ರಂಗನಾಥ ರಾವ್
No comments:
Post a Comment